Pages

Friday, January 2, 2015

ಓರಗೆಯ ಕಿಟಕಿ

ಓರಗೆಯ ಕಿಟಕಿ
ಮುಸ್ಸಂಜೆಯ ರವಿಯ ಬೆಳಕಿನಾಟದಲಿ
ತೋರಿಸುವ ಚಂಚಲ ಕಣ್ಣುಗಳು
ಗುರುತ್ವಾಕರ್ಷಣೆಯ ಪರಮೋಚ್ಚ ಸಾಧ್ಯತೆಯೇನೋ

ಜಪ ಮಣಿಯ ಬದಿಗೊತ್ತಿ ದೇವಭಕ್ತ ಹುಡುಗ
ಕನಲುತ್ತಿದ್ದಾನೆ,ಕದಲುತ್ತಿದ್ದಾನೆ,ತೊದಲುತ್ತಿದ್ದಾನೆ
ಹೃದಯಗಳೆರಡು ನೂರು ಬಲೂನುಗಳಾಗಿ
ಸೂರ್ಯ ರಶ್ಮಿಯ ಜೊತೆ ಚೆಲ್ಲು ಚೆಲ್ಲಾಗಿ
ಕುಂಟೆ ಬಿಲ್ಲೆಯಾಡುತಿದೆ.

ಪ್ರೀತಿಯ ಪ್ರಾರ್ಥನೆ
ಮುಗಿಲು ಮುಟ್ಟುತಿಹೆ ಯೌವನದ ಹಸಿ ದೇಹಗಳಲಿ
ಅದೋ ಮಿನಾರದಿಂದ ಆಝಾನ್,
ಗುಡಿಯಿಂದ ಗಂಟಾ ನಾಧಗಳು ಗಾಳಿಯಲ್ಲಿ ಸಂಧಿಸಿದಂತೆ,ಮನಸುಗಳು ಬಂಧಿಯಾಗುತಿದೆ.

ನಾಚಿ ನೀರಾದ ನೇಸರ,
ಸಮುದ್ರದಲ್ಲಿ ಮುಳುಗಿ ಅಡಗಿಕೊಳ್ಳಹೊರಟಿದ್ದಾನೆ.
ಮರಿ ಮೀನುಗಳಿಗೆ ಮೋಹಕ ಪ್ರೀತಿಯೊಂದರ
ಕಥೆ ಹೇಳಿ ಕೆನ್ನೆ ಕೆಂಪಾಗಿಸಲು....!!

-ಕಂದ

1 comment: